ಬೆಂಗಳೂರು: ‘ರಾಜ್ಯ ಸರ್ಕಾರದ ಅವೈಜ್ಞಾನಿಕ ಬೆಲೆ ಏರಿಕೆಯನ್ನು ಖಂಡಿಸಿ ಇದೇ ಬುಧವಾರ (ನವೆಂಬರ್ 11) ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಪ್ರತಿಭಟನಾ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.
‘ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ಮಾಜಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಲೆ ಏರಿಕೆಯಿಂದ ಜನರು ಪಡುತ್ತಿರುವ ಬವಣೆಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿಸಿ, ಬೆಲೆ ಏರಿಕೆ ವಾಪಸ್ ಪಡೆಯುವಂತೆ ಒತ್ತಾಯಿಸುತ್ತೇವೆ’ ಎಂದು ಮಾಹಿತಿ ನೀಡಿದರು.
‘ನಂತರದ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ. ರೈತರು, ಬಡವರು, ವಿದ್ಯಾರ್ಥಿಗಳ ಪರವಾಗಿ ಬಿಜೆಪಿ ಸದಾ ದನಿ ಎತ್ತಲಿದೆ’ ಎಂದರು.
‘ರಾಜ್ಯದ ಜನರಿಗೆ ದೀಪಾವಳಿಯ ಶುಭಾಶಯ ಕೋರಬೇಕಿದೆ. ಆದರೆ, ಹಬ್ಬದ ಹೊಸ್ತಿಲಲ್ಲಿ ರಾಜ್ಯ ಸರ್ಕಾರವು ಜನರಿಗೆ ಬೆಲೆ ಏರಿಕೆಯ ಬರೆ ಎಳೆದಿದೆ. ಹಾಲಿನ ದರವನ್ನು ಲೀಟರ್ಗೆ ₹8 ಹೆಚ್ಚಿಸುವುದಾಗಿ ಘೋಷಿಸಿದ ಸರ್ಕಾರ, ವಾಸ್ತವದಲ್ಲಿ ವಿವಿಧ ಉತ್ಪನ್ನಗಳ ದರವನ್ನು ₹12ರಿಂದ ₹13ರವರೆಗೆ ಹೆಚ್ಚಿಸಿದೆ. ಒಂದು ಕೆ.ಜಿ. ತುಪ್ಪದ ದರದಲ್ಲಿ ₹180 ಹೆಚ್ಚಳವಾಗಿದೆ. ಮೊಸರಿನ ದರದಲ್ಲೂ ₹14 ಏರಿಕೆ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೆಎಸ್ಆರ್ಟಿಸಿ ಸೇರಿ ಎಲ್ಲ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ40 ರಿಂದ ಶೇ50ರಷ್ಟು ಹೆಚ್ಚಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಹಲವು ಕಡೆಗಳಲ್ಲಿ ಪ್ರಯಾಣಿಕರ ಮೇಲೆ ಶೇ70 ರಿಂದ ಶೇ80ರವರೆಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಸರ್ಕಾರ, ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ’ ಎಂದರು.
‘ರಾಜ್ಯದ ಕನಿಷ್ಠ 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳು ದತ್ತು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದ್ದಾರೆ. ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಗೆ ಅಡಿ (ಸಿಎಸ್ಆರ್) ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವುದರಲ್ಲಿ ತಪ್ಪಿಲ್ಲ. ಆದರೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿಯನ್ನೇ ಖಾಸಗಿ ಕಂಪನಿಗಳ ಮೇಲೆ ಹಾಕುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷಗ್ರಾಮೀಣ ಭಾಗದಲ್ಲಿ ಊಟಕ್ಕೆ ಏನೂ ಇಲ್ಲದಿದ್ದರೂ ಒಂದು ಲೋಟ ಹಾಲು ಕುಡಿದು ಮಲಗಬಹುದು ಎಂಬ ಮಾತಿದೆ. ಆದರೆ ಇಂದು ಬಡ ಕುಟುಂಬಗಳು ಹಾಲು ಖರೀದಿಸಲೂ ಯೋಚಿಸುವಂತಾಗಿದೆ
