ದೇವನಹಳ್ಳಿ: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಲ್ಲಿ ಬಹುಪಾಲು ಕನ್ನಡಿಗರು. ವಿಮಾನ ನಿಲ್ದಾಣದ ವಿಸ್ತರಣೆಯೊಂದಿಗೆ ಸ್ಥಳೀಯ ಯುವ ಜನರಿಗೆ ಮತ್ತಷ್ಟು ಉದ್ಯೋಗಾವಕಾಶ ಕಲ್ಪಿಸಲು ಬದ್ಧರಾಗಿದ್ದೇವೆ’ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಸ್ಪಷ್ಟಪಡಿಸಿದೆ.
ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡುತ್ತಿಲ್ಲ ಎಂಬ ಕನ್ನಡಪರ ಸಂಘಟನೆಗಳ ಆರೋಪದ ಬೆನ್ನಲ್ಲೇ ಶನಿವಾರ ಪ್ರಕಟಣೆ ಹೊರಡಿಸಿರುವ ಬಿಐಎಎಲ್, ಸ್ಥಳೀಯರ ಉದ್ಯೋಗಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ಕಳವಳ ಗಮನಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ರಾಜ್ಯದ ನೆಲ, ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿಮಾನ ನಿಲ್ದಾಣದ ವಾಸ್ತುಶಿಲ್ಪ, ವಿನ್ಯಾಸ, ಕಲಾಕೃತಿಗಳು ಹಾಗೂ ಪ್ರಯಾಣಿಕರಿಗೆ ಒದಗಿಸುವ ಸೇವೆಗಳಲ್ಲಿ ರಾಜ್ಯದ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸಲಾಗಿದೆ. 2008ರಲ್ಲಿ ಕಾರ್ಯಾರಂಭ ಮಾಡಿದಾಗಿನಿಂದಲೂ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
ಕನ್ನಡಪರ ಸಂಘಟನೆಗಳ ಆಗ್ರಹ
ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಡಿಮೆ ನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದ ನಿಯೋಗ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಕಂಪನಿಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು.
ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ನೀಡಬೇಕು ಎಂದು ಒತ್ತಾಯಿಸಿದ್ದ ನಾರಾಯಣಗೌಡ ಕಂಪನಿಗಳ ಪ್ರತಿನಿಧಿಗಳು ಮುಂದಿನ ಒಂದು ವರ್ಷದೊಳಗೆ ಸ್ಥಳೀಯರ ನೇಮಕಾತಿ ಪ್ರಮಾಣ ಹೆಚ್ಚಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದರು. ಇನ್ನೊಂದೆಡೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶೇ 90ರಷ್ಟು ತಮಿಳರು ಉದ್ಯೋಗದಲ್ಲಿದ್ದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಮಾಣ ಕೇವಲ ಶೇ 10ರಷ್ಟಿದೆ ಎಂದು ಆರೋಪಿಸಿದ್ದರು.
ಈ ಹೇಳಿಕೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ಬಹುಪಾಲು ಉದ್ಯೋಗಿಗಳು ಕನ್ನಡಿಗರೇ ಎಂದು ಬಿಐಎಎಲ್ ಪ್ರತಿಪಾದಿಸಿದೆ. ಸ್ಥಳೀಯ ಉದ್ಯೋಗಿಗಳ ನಿಖರ ಸಂಖ್ಯೆ ಅಥವಾ ಶೇಕಡವಾರು ವಿವರ ಪ್ರಕಟಣೆಯಲ್ಲಿ ನೀಡಿಲ್ಲ.

